ನಗದು -
ನೋಟುಗಳು ಹಾಗೂ ನಾಣ್ಯಗಳ ರೂಪದಲ್ಲಿರುವ ದೇಶದೊಳಗೆ ಎಲ್ಲೆಡೆ ಸುಲಭ ವಿನಿಮಯವಾಗಿ ಚಾಲ್ತಿಯಲ್ಲಿರುವ ನಗದೇ ಹಣ.  [ಯಾವ ವಸ್ತುವಿಗೆ  ಇತರೆ ಪದಾರ್ಥಗಳನ್ನು ಕೊಡುವ ಕೊಳ್ಳುವ ಶಕ್ತಿ ಇರುತ್ತದೋ, ಯಾವ ವಸ್ತುವನ್ನು ಪದಾರ್ಥದ ವಿನಿಮಯಕ್ಕೆ ಮಾನ್ಯತೆ ಇರುತ್ತದೆಯೋ ಅದನ್ನು ನಗದು(ಹಣ) ಎಂದು ಕರೆಯಬಹುದು.] ಇತಿಹಾಸವನ್ನು ನಾವು ಅವಲೋಕಿಸಿದರೆ ಹಣದ ಉಗಮದ ಪೂರ್ವದಲ್ಲಿ ಪದಾರ್ಥಗಳ ವಿನಿಮಯವಾಗುತ್ತಿತ್ತು ( Barter System). ನಂತರ ನಗದು ಅಥವಾ ಹಣ ಎಂಬ ಪರಿಕಲ್ಪನೆಯು ಬಂದಿತು. [ವಿವರಣೆಗೆ ನೋಡಿ - ಹಣ] ಅನ್ಯ ದೇಶದ ಹಣವು ನಮ್ಮ ದೇಶದಲ್ಲಿ ನಗದು ಅಥವಾ ಹಣವಾಗುವುದಿಲ್ಲ. ಪರದೇಶದ ಹಣವು ನಮ್ಮ ದೇಶದಲ್ಲಿ ಒಂದು ಸರಕಿದ್ದಂತೆ ಅಷ್ಟೇ. ಅದನ್ನು ಕೊಳ್ಳಬಹುದು ಅಥವಾ ಮಾರಬಹುದು. ಆದರೆ, ನಗದು ಅತ್ಯಂತ ಗರಿಷ್ಠ ಮಟ್ಟದ ದ್ರವ್ಯತ್ವ ಆಸ್ತಿಯಾಗಿದೆ. ಒಂದು ದೇಶದಲ್ಲಿ ಎಷ್ಟು ನಗದು ಚಲಾವಣೆಯಲ್ಲಿರಬೇಕೆಂಬುದನ್ನು ನಿರ್ಧರಿಸುವುದು ವಿತ್ತ ಮಂತ್ರಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕು. ಬ್ಯಾಂಕುಗಳ ನಗದು ವ್ಯವಹಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಒಂದು ಅಧಿಸೂಚನೆಯ ಪ್ರಕಾರ ತಮ್ಮ ಠೇವಣಿಯ ಮೊತ್ತದಲ್ಲಿ ಸ್ವಲ್ಪಭಾಗವನ್ನು ಕೇಂದ್ರೀಯ ಬ್ಯಾಂಕಿನಲ್ಲಿ ತೊಡಗಿಸಬೇಕು. ಇದನ್ನು ನಗದು ಆಪದ್ಧನ ಮೀಸಲು ಅನುಪಾತ (Cash Reserve Ratio - CRR) ಈ ಅನುಪಾತವನ್ನು ಆಗಿಂದಾಗ್ಯೆ ಬದಲಾಯಿಸಲಾಗುತ್ತದೆ.  ಭಾರತೀಯ ರಿಸರ್ವ್ ಬ್ಯಾಂಕು ತನ್ನ ಅಧಿಸೂಚನೆಯ ಮೂಲಕ ಪ್ರತಿಯೊಂದು ಬ್ಯಾಂಕು ತನ್ನಲ್ಲಿನ ಬೇಡಿಕೆ ಹಾಗು ಸಾವಧಿ ಜವಾಬ್ದಾರಿಗಳ ಮೊತ್ತಕ್ಕೆ ತನ್ನ ಆದೇಶದಲ್ಲಿ ನಮೂದಿಸಿರುವ ಶೇಕಡಾವಾರು ಪ್ರಮಾಣದಲ್ಲಿ ನಗದನ್ನು ಆಪದ್ಧನ ಮೀಸಲಾಗಿ ಇಡಬೇಕಾಗುತ್ತದೆ. ಈ ಹಣವನ್ನು ಬ್ಯಾಂಕುಗಳು ಒಂದೆಡೆಯೇ ಇಡಬೇಕೆಂದಿಲ್ಲ. ಅದನ್ನು ತನ್ನ ಬೇರೆಯ ಬ್ಯಾಂಕುಗಳ ಚಾಲ್ತಿ ಖಾತೆಯಲ್ಲಿ ಇಟ್ಟಿರಬಹುದು. ರಿಸರ್ವ್ ಬ್ಯಾಂಕಿನ ತನ್ನ ಖಾತೆಯಲ್ಲಿ ಇಡಬಹುದು. ನಗದನ್ನೇ ತನ್ನ ಬ್ಯಾಂಕಿನಲ್ಲಿ ಇಟ್ಟುಕೊಂಡಿರಬಹುದು. ಇವೆಲ್ಲವುಗಳ ಒಟ್ಟು ಮೊತ್ತವೆ ಯಾವುದೇ ದಿನಾವಾಗಲಿ ನಿಗದಿತ ಅನುಪಾತಕ್ಕಿಂತ ಕಡಿಮೆಯಿರದಂತೆ ನೋಡಿಕೊಳ್ಳುವುದು ಶಾಸನಬದ್ಧ ವಿಧಿಯಾಗಿದೆ.  ಈ ನಗದು ಅನುಪಾತವನ್ನು ಯಾವುದಾದರೂ ಬ್ಯಾಂಕು ಸಾಧಿಸಲಾಗದಿದ್ದರೆ ಅದಕ್ಕೆ ಸೂಕ್ತ ದಂಡವನ್ನು ವಿಧಿಸಲಾಗುತ್ತದೆ. 
(ಕೆ.ಆರ್.ಎಂ.ಎ.)
(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ